ಬಿಹಾರೀಲಾಲ್
1595-1663. ಹಿಂದೀ ಸಾಹಿತ್ಯದ ಹೆಸರಾಂತ ಕವಿ. ಹುಟ್ಟಿದ್ದು ಗ್ವಾಲಿಯರ್ ನಲ್ಲಿ. ತಂದೆ ಕೇಶವರಾಯ, ನಿಂಬಾರ್ಕ ಸಂಪ್ರದಾಯದ ನರಹರಿದಾಸ ಮಹಂತರ ಶಿಷ್ಯ. ಮಥುರಾದ ಬ್ರಾಹ್ಮಣ ಕನ್ಯೆಯೊಡನೆ ಬಿಹಾರಿಲಾಲನ ವಿವಾಹವಾಗಿದ್ದಿತು. ಈತನಿಗೆ ಸಂಸ್ಕøತ ಪ್ರಾಕೃತಗಳಲ್ಲಿ ಅಲ್ಲದೆ, ಜ್ಯೋತಿಷ್ಯಶಾಸ್ತ್ರದಲ್ಲೂ ಅಪಾರ ಪಾಂಡಿತ್ಯವಿತ್ತು. ಪಾರಸಿ ಭಾಷೆಯಲ್ಲೂ ನಿಷ್ಣಾತನಿದ್ದ. 

	ಬಿಹಾರಿ ಜಯಪುರದ ಮಹಾರಾಜ ಜಯಸಿಂಹ ಆಸ್ಥಾನಕವಿ ಹಾಗೂ ಗುರುವಾಗಿದ್ದ. ಈತ ಜಯಸಿಂಹ ಪ್ರೀತ್ಯಾದರಗಳನ್ನು ಪಡೆದುಕೊಂಡ ಬಗೆಗೆ ಕುತೂಹಲಕರಕವಾದ ಒಂದು ಕಥೆ ಇದೆ. ಒಮ್ಮೆ ಈತ ರಾಜನನ್ನು ಕಾಣಲು ಅರಮನೆಗೆ ಬಂದಾಗ, ರಾಜ ತನ್ನ ರಾಜಕಾರ್ಯಗಳನ್ನೆಲ್ಲ ದೂರಸರಿಸಿ ಸದಾ ತನ್ನ ನವವಿವಾಹಿತ ಪತ್ನಿಯ ಪ್ರೇಮಪಾಶದಲ್ಲಿ ಬಂಧಿತನಾಗಿರುವ ಸುದ್ದಿ ತಿಳಿಯುತ್ತದೆ. ರಾಜನ ಈ ಮನೋವೃತ್ತಿಯಿಂದಾಗಿ ಸಾಮಂತರು ಹಾಗೂ ಪ್ರಜೆಗಳು ದುಃಖಿತರಾಗಿರುವುದನ್ನು ಕಂಡು ಬಿಹಾರಿ ದೋಹೆಯೊಂದನ್ನು ಬರೆದುಕಳಿಸಿದನಂತೆ: ನಹೀಂ ಪರಾಗ್ ನಹೀಂ ಮಧುರ್ ಮಧು, ನಹೀಂ ವಿಕಾಸ್ ಇಹೀಂ ಕಾಲ್ ಆಲಿ ಕಲ್ಲೀಹೀ ಸೋರ ಬಿಧ್ಯೋ, ಆಗೇ ಕೌನ್ ಹವಾಲ್ (ಪರಾಗ ಮೂಡದ ಮಧು ಒಸರದ ಇನ್ನೂ ವಿಕಸಿತಗೊಳ್ಳದ ಮೊಗ್ಗಿನಲ್ಲಿ ಭ್ರಮರ ಕುಳಿತಿರಲು ಜಗವ ರಕ್ಷಿಸುವವರಾರು) ಬಿಹಾರಿಯ ಈ ದೋಹೆಯನ್ನು (ದ್ವಿಪದಿ) ಓದಿ ರಾಜ ಮತ್ತು ರಾಣಿಯಿಬ್ಬರೂ ತಮ್ಮ ಹೊಣೆಗಾರಿಕೆ ಅರಿತು ಕಾರ್ಯೋನ್ಮುಖರಾದರಂತೆ. 

	ಸತಸಯೀ ಈತನ ಪ್ರಸಿದ್ಧ ಗ್ರ್ರಂಥ. ಇದರಲ್ಲಿ 713 ದೋಹೆಗಳು (ದ್ವಿಪದಿ) ಹಾಗೂ ಸೋರಠಾಗಳು ಸಂಗ್ರಹಿತವಾಗಿವೆ. ಗಾಥಾ ಸಪ್ತಶತಿ, ಆರ್ಯಾ ಸಪ್ತಶತಿ, ಅಮರುಕ ಶತಕ ಮುಂತಾದವುಗಳ ಪ್ರೇರಣೆ ಈ ಗ್ರಂಥಕ್ಕೆ ಹಿನ್ನೆಲೆಯಲ್ಲಿದ್ದರೂ ಕವಿ ತನ್ನ ಸ್ವಂತಿಕೆ ಮೆರೆದಿದ್ದಾನೆ. ಈತನ ಒಂದೊಂದು ಮುಕ್ತಕವೂ ವಿಶಿಷ್ಟ ಕಲ್ಪನೆ ಮತ್ತು ತಾನು ಕಂಡು ಕೇಳಿದ ಆತ್ಮೀಕರಿಸಿಕೊಂಡ ಭಾವಗಳನ್ನು ಕಾವ್ಯಾತ್ಮಕಗೊಳಿಸುವಾಗ ತೋರಿರುವ ಕಲಾತ್ಮಕತೆಯ ಕುಸುರುಗಾರಿಕೆಯಿಂದಾಗಿ ರಮಣೀಯವಾಗುತ್ತ ಹೋಗುತ್ತವೆ. ಅಲಂಕಾರ, ರಸ ಭಾವ, ನಾಯಿಕಾಭೇದ, ಧ್ವನಿ, ವಕ್ರೋಕ್ತಿ, ರೀತಿ ಈ ಎಲ್ಲದರ ಉತ್ಕøಷ್ಟ ನಿರ್ವಹಣೆ ಈ ಕಾವ್ಯದಲ್ಲಾಗಿದೆ. 

	ಈ ಕಾವ್ಯ ಶೃಂಗಾರ, ಭಕ್ತಿ ಹಾಗೂ ನೀತಿಯ ತ್ರಿವೇಣಿ ಸಂಗಮ ಎಂದು ವಿಮರ್ಶಕರ ಅಭಿಪ್ರಾಯ. ಮುಖ್ಯವಾಗಿ ಈತ ಶೃಂಗಾರ ಕವಿ. ಈತನ ಕಾವ್ಯದ ಕೇಂದ್ರಬಿಂದು ಶೃಂಗಾರ. ಪ್ರೇಮದ ವಿಭಿನ್ನ ರೂಪಗಳ, ಸ್ಥಿತಿಗಳ ಮನೋಜ್ನ ಚಿತ್ರಣ ಈತನ ರಚನೆಗಳಲ್ಲಿ ದೊರೆಯುತ್ತದೆ. ನಾಯಿಕೆಯ ರೂಪವರ್ಣನೆಯಲ್ಲಿ ಬಿಹಾರಿ ಎತ್ತಿದ ಕೈ. ಇಲ್ಲಿಯ ನಖ ಶಿಖವರ್ಣನೆ ಅಪೂರ್ವವಾದುದು. ಬಿಹಾರಿಯ ಕುಂಚದಲ್ಲಿ ನಾಯಿಕೆಯ ಕಣ್ಣುಗಳ ವರ್ಣನೆ ತನ್ನೆಲ್ಲ ಸೊಗಸು ಚೆಲುವಿನೊಂದಿಗೆ ವರ್ಣಿತಗೊಂಡಿದೆ. 

	ಪೂರ್ವಾನುರಾಗ, ವಯಃಸಂಧೀ ಮುನಿಸು, ಯೌವನದ ಮಾದಕತೆಯನ್ನು ವರ್ಣಿಸುವುದರಲ್ಲಿ ಈತ ಸಿದ್ಧಹಸ್ತ. ಶೃಂಗಾರದ ಸಂಯೋಗ ಪಕ್ಷದ ವರ್ಣನೆಯಲ್ಲಿ ಹೆಣ್ಣಿನ ನೂರು ಭಾವನೆಗಳನ್ನು ಹತ್ತು ಶಬ್ದಗಳಲ್ಲಿ ಸೆರೆಹಿಡಿಯುವುದರಲ್ಲಿ ನಿಸ್ಸೀಮ. ಈ ಬಗೆಯ ರಚನೆಗಳು ಓದುಗರ ಮನಸ್ಸನ್ನು ಬಹುಕಾಲ ಸೆರೆಹಿಡಿಯಬಲ್ಲವು. 

	ಬಿಹಾರಿ ಶೃಂಗಾರ ಕವಿ ಎಂದೇ ಪ್ರಸಿದ್ಧನಾಗಿದ್ದರೂ ಭಕ್ತಿರಸಪ್ರಧಾನವಾದ ಮುಕ್ತಕಗಳನ್ನೂ ಬರೆದಿದ್ದಾನೆ. ನಿಂಬಾರ್ಕ ಸಂಪ್ರದಾಯದಲ್ಲಿ ದೀಕ್ಷಿತನಾಗಿದ್ದ ಈತನ ಕಾವ್ಯದಲ್ಲಿ ನೀತಿಗೂ ಮಹತ್ತ್ವದ ಸ್ಥಾನವಿದೆ. ಈತ ಶಿಷ್ಟ ವ್ರಜಭಾಷೆಯಲ್ಲಿ ತನ್ನ ಮುಕ್ತಕಗಳನ್ನು ಬರೆದಿದ್ದಾನೆ. ಬುಂದೇಲ್‍ಖಂಡ್‍ನಲ್ಲಿ ಹೆಚ್ಚು ದಿನ ಇದ್ದ ಕಾರಣ ಈತನಲ್ಲಿ ಅಲ್ಲಿಯ ಶಬ್ಕಗಳು ಹೇರಳವಾಗಿ ದೊರೆಯುತ್ತವೆ. ನುಡಿಗಟ್ಟುಗಳ, ಗಾದೆಗಳ ಸಹಜ ಪ್ರಯೋಗವಿದೆ. ಭಾಷೆ ಭಾವಾನುಗಾಮಿಯಾಗಿದ್ದು ಶೈಲಿ ಪ್ರಾಂಜಲವೆನಿಸಿದೆ. ದೋಹಾ ಛಂದಸ್ಸು ಈತನಿಗೆ ಪ್ರಿಯವಾದುದು. 

	ಹಿಂದೀ ಸಾಹಿತ್ಯಕ್ಕೆ ಬಿಹಾರಿಯ ಅಮೂಲ್ಯ ಕೊಡುಗೆ ಎಂದರೆ ಈ ಸತ್‍ಸಯೀ ಕಾವ್ಯವೊಂದೆ. ಈತನಿಗೆ ದೊರೆತ ಯುಶಸ್ಸಿನಿಂದ ಪ್ರೇರಿತರಾಗಿ ಈ ಪ್ರಕಾರದಲ್ಲಿ ಕಾವ್ಯ ಬರೆಯಲು ಅನೇಕರು ಮುಂದಾದರಲ್ಲದೆ ಬಹಳಷ್ಟು ಜನ ಕವಿಗಳು, ವಿದ್ವಾಂಸರು ಸತ್‍ಸಯೀಗೆ ತಮ್ಮದೇ ಆದ ವ್ಯಾಖ್ಯಾನ ಹಾಗೂ ವಿಮರ್ಶೆಯನ್ನು ಬರೆದಿದ್ದಾರೆ. ರಾಮಚರಿತ ಮಾನಸದ ಅನಂತರ ಕಾವ್ಯಾಸಕ್ತರ ಹೆಚ್ಚು ಗಮನವನ್ನು ಸೆಳೆದ ಕೃತಿ ಎಂದರೆ ಈತನ ಸತ್‍ಸಯೀ. ಹಿಂದೀ ಸಾಹಿತ್ಯದಲ್ಲಿ ಈತನಷ್ಟು ಕಡಿಮೆ ಬರೆದು ಅಪಾರ ಯಶಸ್ಸು ಪಡೆದ ಕವಿಗಳು ವಿರಳ ಎಂದೇ ಹೇಳಬೇಕು. 									
(ಟಿ.ಎಚ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ